ಕಾಡು ಬೆಂಡೆ

ಹರ್ನಾಂಡಿಯೇಸೀ ಕುಟುಂಬಕ್ಕೆ ಸೇರಿದ ಮರ. ಇದರ ವೈಜ್ಞಾನಿಕ ಹೆಸರು ಗೈರೊಕಾರ್ಪಸ್ ಅಮೆರಿಕಾನಸ್. ನದಿ ಮತ್ತು ಸಮುದ್ರತೀರಗಳಲ್ಲಿ ಹಾಗೂ ಒಣಕಾಡುಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಇದು ದಪ್ಪಗಾತ್ರದ ಕೊಂಬೆಗಳುಳ್ಳ ದೊಡ್ಡಮರ. ಇದರ ಎಲೆಗಳು ದೊಡ್ಡಗಾತ್ರದವು; ಪರ್ಯಾಯವಾಗಿ ಜೋಡಣೆಗೊಂಡಿವೆ. ಅಖಂಡವಾಗಿರಬಹುದು ಇಲ್ಲವೆ ಹಲವಾರು ಹಾಲೆಗಳಾಗಿ ವಿಭಾಗವಾಗಿರಬಹುದು. ಇವು ರೆಂಬೆಗಳ ತುದಿಯಲ್ಲಿ ದಟ್ಟವಾಗಿ ಗೊಂಚಲಿನಂತೆ ಸಮಾವೇಶಗೊಂಡಿವೆ. ಹೂಗಳು ಚಿಕ್ಕವು, ಭಿನ್ನಲಿಂಗಿಗಳು. ದೊಡ್ಡ ಮಧ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ನಿರ್ದಿಷ್ಟವಾದ ಪುಷ್ಪಪತ್ರಗಳಾಗಲೀ ದಳಗಳಾಗಲೀ ಇಲ್ಲ. ಅದರ ಬದಲು ಪೆರಿಯಾಂತ್ ಎಂಬ ಭಾಗವಿದೆ. ಇದು ಗಂಡು ಹೂವಿನಲ್ಲಿ 4-7 ಭಾಗಗಳಾಗಿಯೂ ಹೆಣ್ಣು ಹೂವಿನಲ್ಲಿ 2 ಭಾಗಗಳಾಗಿಯೂ ಸೀಳಾಗಿದೆ. ಕೇಸರಗಳ ಸಂಖ್ಯೆ 4-7ರ ವರೆಗೆ ವ್ಯತ್ಯಾಸ ವಾಗುತ್ತದೆ. ಪೆರಿಯಾಂತಿನ ಬುಡಭಾಗಕ್ಕೆ ಅಂಟಿಕೊಂಡಿವೆ. ಕೇಸರಗಳ ನಡುನಡುವೆ ಬಂಜೆಕೇಸರಗಳಿರುವುದೂ ಉಂಟು. ಹೆಣ್ಣುಹೂವಿನಲ್ಲಿ ಒಂದೇ ಕಾರ್ಪೆಲನ್ನೊಳಗೊಂಡ ನೀಚಸ್ಥಾನದ ಅಂಡಾಶಯವಿದೆ. ಫಲ ಅಷ್ಟಿಫಲದಂತಿದೆ. ಹೂವಿನ ಪೆರಿಯಾಂತ್ ಭಾಗದ ಹಾಲೆಗಳು ಫಲದಲ್ಲೂ ಉಳಿದಿದ್ದು ಎರಡು ಉದ್ದನೆಯ ರೆಕ್ಕೆಗಳಂಥ ರಚನೆಗಳಾಗಿ ಮಾರ್ಪಟ್ಟಿವೆ. ಈ ರೆಕ್ಕೆಗಳು ಫಲಪ್ರಸಾರದಲ್ಲಿ ಸಾಹಯಕವಾಗಿವೆ.

 ಇದರ ಚೌಬೀನೆ ಮೃದುವಾಗಿಯೂ ಹಗುರಾಗಿಯೂ ಇದೆ. ಇದರ ಬಣ್ಣ ಬೂದು. ಬೊಂಬೆಗಳು, ಬಾಚಣಿಗೆ, ಪೆಟ್ಟಿಗೆ, ಪೀಠೋಪಕರಣ, ದೋಣಿ, ದೋಣಿಯ ಹುಟ್ಟುಗಳು ಮುಂತಾದುವನ್ನು ಮಾಡಲು ಇದನ್ನು ಉಪಯೋಗಿಸುತ್ತಾರೆ. ಬೀಜಗಳನ್ನು ಜಪಸರಗಳಲ್ಲಿ ಮತ್ತು ಕಂಠಹಾರಗಳಲ್ಲಿ ಮಣಿಗಳಾಗಿ ಉಪಯೋಗಿಸುವುದುಂಟು.

(ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ